ಕರುನಾಡಿಗೊಂದು ಹೊಸ ಧ್ವಜ - ಹಳತು ಹೊನ್ನುಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು


               ಅಪ್ಪಟ ಕನ್ನಡ ಪ್ರೇಮಿಗೆ ಅಥವಾ ಕನ್ನಡ ನಾಡನ್ನು ಪ್ರೀತಿಸುವ ಅಥವಾ ಕರುನಾಡಿನ ಬಗ್ಗೆ ಹೆಮ್ಮೆಯುಳ್ಳ ಯಾವುದೇ ವ್ಯಕ್ತಿಯಾದರೂ ಸಂತೋಷಿಸುವ ಸಂದರ್ಭವಿದು.

               ಏಕೆಂದರೆ ರಾಜ್ಯಸರ್ಕಾರ ಕನ್ನಡದ ಬಾವುಟಕ್ಕೆ ಹೊಸ ರೂಪು-ರೇಷೆಯನ್ನು ಕೊಟ್ಟು, ಅದನ್ನು ಅಧಿಕೃತವಾಗಿ ರಾಜ್ಯದ ಧ್ವಜವನ್ನಾಗಿ ಸಂವಿಧಾನದ ಅಡಿಯಲ್ಲಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೆ, ನಿಜವಾಗಿಯೂ ಕನ್ನಡದ ಜನ ಈಗಿರುವ ಧ್ವಜವನ್ನು ಮರು-ರೂಪಿಸುವಂತಾಗಲಿ ಅಥವಾ ಕಾಶ್ಮೀರದಂತೆ ನಮ್ಮ ಧ್ವಜಕ್ಕೆ ಅಧಿಕೃತ ಸ್ಥಾನ ದೊರೆಯಲಿ ಎಂದು ಬೀದಿಗಿಳಿದು ಬೇಡಿಕೊಂಡಿದ್ದರೆ?!

               ವರ್ಷಾನುಗಟ್ಟಲೆ ರಸ್ತೆಗಿಳಿದು ಪ್ರತಿಭಟಿಸಿದರೂ ದೊರೆಯದ ಮಹಾದಾಯಿ ನೀರು ನೆನಪಿದೆ ಅಲ್ಲವೇ?! ನೀರನ್ನು ತರಲು ಕಾಳಜಿವಹಿಸದ ಸರ್ಕಾರಕ್ಕೆ ಇಲ್ಲದ ಭಾವನೆಗಳನ್ನು ಕನ್ನಡಿಗರಲ್ಲಿ ಹುಟ್ಟುಹಾಕಿ, ದೇಶದಲ್ಲಿ ಹೊಸರೀತಿಯ ಬಿರುಕು ಮೂಡಿಸುವಂತಹ ಕೆಲಸದಲ್ಲಿ ಕಾಳಜಿ, ತರಾತುರಿ ಮತ್ತು ಪ್ರಮುಖ ಆಸಕ್ತಿ ಇರುವಂತಿದೆಯಲ್ಲ!

               ಅತ್ತ ಪಕ್ಕದ ಆಂಧ್ರದವರಿಗೆ ತಮಗೆ ಕಾಶ್ಮೀರದಂತೆ ಪ್ರತ್ಯೇಕ ದರ್ಜೆ/ಸ್ಥಾನಮಾನ ಬೇಕೆಂದು ಪಟ್ಟು ಹಿಡಿದಿರುವಾಗಲೇ, ಇತ್ತ ನಮ್ಮ ಕೆಲ ಕನ್ನಡಿಗರಿಗೆ ಕಾಶ್ಮೀರದಂತೆ ಪ್ರತ್ಯೇಕ ಧ್ವಜವೊಂದು ಅಧಿಕೃತವಾಗಿ ಬೇಕೆಂದು ಅನಿಸುತ್ತಿದೆ!

ಇವೆರಡೂ ರಾಜ್ಯಗಳು ಸಧ್ಯದರಲ್ಲಿ ಚುನಾವಣೆ ಎದುರಿಸಲಿವೆ ಎಂಬುದು ಮುಖ್ಯ ಅಂಶ!


ಸರಿ, ನಾವು ಅಧಿಕೃತವಾಗಿ ರಾಜ್ಯಕ್ಕೆ ಪ್ರತ್ಯೇಕ ಧ್ವಜವೊಂದನ್ನು ಪಡೆದೆವೆಂದು ಭಾವಿಸಿ, ಅದರಿಂದ ನಾವು ಗಳಿಸಿದ ಅತ್ಯದ್ಭುತ ಸಾಧನೆಯಾದರು ಏನು? ಈಗಲೂ ನಾವು ನಮ್ಮ ಅರಿಶಿನ-ಕುಂಕುಮ ಬಣ್ಣದ ಬಾವುಟವನ್ನು ಬಳಸುತ್ತಿದ್ದೇವೆ ಆದರೆ ಇದರಿಂದ ದೇಶದ ಏಕತೆಗೆ ಯಾವುದೆ ಧಕ್ಕೆ ಬರದು – ಏಕೆಂದರೆ ಇದು ನಾವು ನಮ್ಮ ಭಾವನೆಗಳಿಗೆ ಜೋತುಬಿದ್ದು ರಾಷ್ಟ್ರಧ್ವಜಕ್ಕೆ ಸಮನಾಗಿ ಗೌರವಿಸುವ ಅನಧಿಕೃತ ಬಾವುಟ.

               ಒಂದುವೇಳೆ ಪ್ರಸ್ತುತ ರಾಜ್ಯದಲ್ಲಿರುವ ಸರ್ಕಾರ ಒಳ್ಳೆಯ ಉದ್ದೇಶದಿಂದಲೇ ಈ ಕೆಲಸ ಮಾಡಿದೆ ಎಂದು ಊಹಿಸಿದರು ಸಹ, “ಕರ್ನಾಟಕದಲ್ಲಿ ಯಾವಾಗಲೂ ಒಳ್ಳೆಯವರೇ ಸರ್ಕಾರ ನಡೆಸುತ್ತಾರೆ” – ಎಂದು ಯಾರು ತಾನೆ ಖಚಿತಪಡಿಸಲು ಸಾಧ್ಯ?

               ನನಗೆ ನನ್ನ ರಾಜ್ಯ, ನನ್ನ ಭಾಷೆ ಎಂದರೆ ಪಂಚಪ್ರಾಣ. ಅಂತೆಯೇ ನನ್ನ ರಾಷ್ಟ್ರವೆಂದರೂ ಅಷ್ಟೇ ಸರಿಸಮವಾದ ಪ್ರೀತಿ (ನನಗವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ). ನನ್ನ ರಾಜ್ಯವು ರಾಷ್ಟ್ರ/ಅಂತರಾಷ್ಟ್ರ ಮಟ್ಟದಲ್ಲಿ ಒಳ್ಳೆಯದಕ್ಕೆ ಹೆಸರುವಾಸಿಯಾದರೆ ಸ್ವತಃ ನಾನೇ ಏನನ್ನೊ ಸಾಧಿಸಿರುವಂತೆ ಬೀಗುತ್ತೇನೆ. ನನ್ನ ರಾಜ್ಯವು ರಾಷ್ಟ್ರ/ಅಂತರಾಷ್ಟ್ರ ಮಟ್ಟದಲ್ಲಿ ಕೆಟ್ಟದಕ್ಕೆ ಕುಖ್ಯಾತಿ ಪಡೆದರೆ ಸ್ವತಃ ನಾನೇ ಏನನ್ನೊ ತಪ್ಪು ಮಾಡಿರುವಂತೆ ಕೊರಗುತ್ತೇನೆ.

               “ಬೆಂಗಳೂರಲ್ಲಿರುವ ಎಚ್‌ಏ‌ಎಲ್ ನಿಂದ ಅಭಿವೃದ್ಧಿಪಡಿಸಿದ ಹೆಲಿಕಾಪ್ಟರ್ ಗಳು ಸೇನೆಯಲ್ಲಿ ಹೆಸರುವಾಸಿಯಾದಾಗ”, “ದೇಶದ ಹೊಸ-ಹೊಸ ಯೋಜನೆಗಳು ಬೆಂಗಳೂರಲ್ಲಿಯ ಪ್ರಯೋಗಾಲಯಗಳಲ್ಲಿ ರೂಪುಗೊಳ್ಳುವಾಗ (ಉದಾ: ಆಧಾರ್, ವಿಮಾನಗಳ ಇಂಜಿನ್ನು, ಇತರೆ)” --- “ದೇಶಕ್ಕೆ ನನ್ನ ರಾಜ್ಯದ ಕೊಡುಗೆಯಿದು” ಎಂದು ಹೆಮ್ಮೆಯಿಂದ ಸಿಕ್ಕ-ಸಿಕ್ಕವರಿಗೆಲ್ಲ ಹೇಳುತ್ತಾ ಮೆರೆಯುತ್ತಿದ್ದೆ.

               “ದಕ್ಷಿಣ ಭಾರತದ ಬೃಹತ್ ಆಣೆಕಟ್ಟೆಗಳನ್ನು ಒಡೆಯಲು ಹೊಂಚುಹಾಕಿ ಕುಳಿತಿದ್ದ ಭಯೋತ್ಪಾದಕರು ನನ್ನ ರಾಜ್ಯದಲ್ಲಿ ನೆಲೆಸಿದ್ದಾರೆ” --- ಎಂದು ಕೇಳಿದಾಗ ದುಖದಿಂದ ದೇವರಲ್ಲಿ ನನ್ನ ದೇಶ ಹಾಗು ನಾಡಿಗೋಸ್ಕರ ಪ್ರಾರ್ಥಿಸಿದ್ದೂ ಇದೆ.

               ಕಾಲ ಯಾವಾಗಲು ಒಂದೇರೀತಿ ಇರುವುದಿಲ್ಲ. “ಮುಂದೊಂದು ದಿನ ಕೆಟ್ಟಜನರ ಕೈಗೆ ರಾಜ್ಯ ಸರ್ಕಾರದ ಅಧಿಕಾರದ ಚುಕ್ಕಾಣಿ ಸಿಕ್ಕರೆ, ಅವರು ನಮ್ಮ ಭಾವನೆಗಳನ್ನು ಬಳಸಿ ನಮ್ಮ ಎಳೆ ವಯ್ಯಸ್ಸಿನ ಮುಗ್ಧ ಯುವಜನರ ತಲೆಕೆಡಿಸಿ ದೇಶದ ವಿರುದ್ಧ ಎತ್ತಿ ಕಟ್ಟುವುದಿಲ್ಲ” – ಎಂದು ಯಾರು ಪ್ರಮಾಣ ಮಾಡಬಲ್ಲರು? ಈಗಿರುವ ಸರ್ಕಾರಕ್ಕೆ ತಾನು ಬರುವ ಚುನಾವಣೆಯಲ್ಲಿ ಗೆಲ್ಲುವುದೋ ಇಲ್ಲವೊ ಎಂಬುದೇ ಖಾತ್ರಿಯಿಲ್ಲದಿರುವಾಗ, ರಾಜ್ಯದ ಭವಿಷ್ಯತ್ತಿನ ಬಗ್ಗೆ ಹೇಗೆತಾನೆ ಖಚಿತವಾಗಿ ಹೇಳಬಲ್ಲುದು?

               “ಇದೆಲ್ಲಾ ಕೇವಲ ಊಹೆ” ಅಥವಾ “ಇದೆಲ್ಲಾ ಆಗದ ಮಾತು” ಎಂದು ನಿರ್ಲಕ್ಷವೇ? ಇನ್ನೊಮ್ಮೆ ಸರಿಯಾಗಿ ದೂರದೃಷ್ಟಿ & ಮುಕ್ತ ಮನಸ್ಸಿನಿಂದ ಯೋಚಿಸಿನೋಡಿ, ಏಕೆಂದರೆ ಕಾಶ್ಮೀರದ ರಾಜನಾಗಲಿ, ಅದರ ಅಂದಿನ ಪ್ರಜೆಗಳಾಗಲಿ ತಮ್ಮ ರಾಜ್ಯದ ಸ್ಥಿತಿ ಮುಂದೊಂದು ದಿನ ಇಷ್ಟು ರೀತಿಯ ಅರಾಜಕತೆಗೆ ಹೋಗುತ್ತದೆ ಎಂದು ಭಾವಿಸಿರಲಿಲ್ಲ ಅಲ್ಲವೇ? ಆದರೆ ಊಹಿಸದ ಆ ಸ್ಥಿತಿ ಈಗಾಗಲೇ ಆ ರಾಜ್ಯಕ್ಕೆ ಮುಳುವಾಗಿ ಕಾಡುತ್ತಿದೆ. ಅದರಿಂದ ದೇಶದ ಭದ್ರತೆಗೂ ಅಪಾಯ ಒದಗಿ ಭೂಮಿಯಮೇಲಿನ ಸ್ವರ್ಗದಂತಿರುವ ಅಷ್ಟೊಳ್ಳೆಯ ರಾಜ್ಯ ಎಷ್ಟು ಕೆಟ್ಟ ಸ್ಥಿತಿಯಲ್ಲಿ ಕಾಲ ತಳ್ಳುತ್ತಿದೆ ಎಂದು ನಿಮಗರಿವಿದೆಯಲ್ಲವೇ?

               ಕಾಶ್ಮೀರದ ವಿಷಯ ಬಂದಾಗ ಯಾರೇ ಆದರು “ನಮ್ಮ ರಾಜ್ಯಗಳಿಗೆ ಇರದ ಪ್ರತ್ಯೇಕ ಸ್ಥಾನಮಾನ ಆ ರಾಜ್ಯವೊಂದಕ್ಕೇ ಏಕೆ?” ಎಂದು ಸ್ವಾಭಾವಿಕವಾಗಿ ಪ್ರಶ್ನಿಸುತ್ತೇವೆ. ಅಥವಾ “ನಮಗೂ ಕಾಶ್ಮೀರದಂತೆ ಪ್ರತ್ಯೇಕ/ಆಧ್ಯತೆಯ ಸ್ಥಾನಮಾನ ಬೇಕು” ಎಂದು ವಾದಿಸುತ್ತೇವೆ. ಅದರಿಂದ ದೇಶದಲ್ಲಿ ಒಡಕು ಮೂಡುತ್ತದೆ ಎಂದು ತಿಳಿದಿದ್ದರೂ ನಾವು ಹೇಗೆಲ್ಲಾ ವಾದಿಸುತ್ತೇವೆ.

               ಅದೇ ರೀತಿ ಈಗ ನಾವು “ಪ್ರತ್ಯೇಕವಾಗಿ ಅಧಿಕೃತವಾದ ಧ್ವಜವೊಂದು ನಮ್ಮ ರಾಜ್ಯಕ್ಕೆ ಬೇಕು” ಎಂದರೆ, ನಾಳೆ ಇರುವ ೨೦-೩೦ ರಾಜ್ಯಗಳೆಲ್ಲ ತಮ್ಮ-ತಮ್ಮ ರಾಜ್ಯಗಳಿಗೂ ಪ್ರತ್ಯೇಕ ಧ್ವಜಗಳು ಬೇಕೆಂದು ವಾದಿಸುತ್ತಾರೆ. ಒಂದುವೇಳೆ ದೇಶದಲ್ಲಿರುವ ಎಲ್ಲಾ ರಾಜ್ಯಗಳಿಗೂ ಅವರವರ ಪ್ರತ್ಯೇಕ ಧ್ವಜಗಳನ್ನು ನೀಡಿದೆವೆಂದು ಇಟ್ಟುಕೊಳ್ಳಿ, ಹಾಗಾದರೆ ರಾಷ್ಟ್ರಧ್ವಜದ ಅರ್ಥವೇನು? ಅದರ ಬಗ್ಗೆ ಭಾವನೆ ವ್ಯಕ್ತಪಡಿಸುವವರು ಯಾರು? ಎಲ್ಲರೂ ಅವರವರ ರಾಜ್ಯಗಳ ಬಾವುಟಗಳಿಗೇ ಮೊದಲ ಆದ್ಯತೆ ನೀಡುತ್ತಾರೆ. ಅಂದರೆ ದೇಶದಲ್ಲಿ ಬಿರುಕುಮೂಡುವ ಕೆಲಸ ಆರಂಭವಾಯಿತೆಂದು ಅರ್ಥವಲ್ಲವೇ?!

               ಇಲ್ಲಿಯವರೆಗೆ ನಮಗೆ (ಅಂದರೆ ಕನ್ನಡಿಗರಿಗೆ) ರಾಜ್ಯ ಹಾಗು ರಾಷ್ಟ್ರ ಧ್ವಜಗಳು ಸಮನಾಗಿ ಗೌರವಯುತವಾದ ಸಂಕೇತಗಳಾಗಿದ್ದವು. ನಮ್ಮ ಮುಂದಿನ ಪೀಳಿಗೆಯಲ್ಲಿ ರಾಷ್ಟ್ರಧ್ವಜ ಕಡೆಗಣನೆಗೆ ಗುರಿಯಾಗುವುದಿಲ್ಲ ಎಂದು ಖಾತ್ರಿಪಡಿಸುವವರು ಯಾರು?

               ನಾವು ಇಲ್ಲಿಯವರೆಗೆಯೂ ಧ್ವಜವೊಂದನ್ನು ಹೊಂದಿದ್ದೆವು ಅದಕ್ಕೆ ಕೇವಲ ಮರು-ರೂಪ ನೀಡಿದ್ದರೆ ಸಾಕಿತ್ತಲ್ಲವೆ?! ಪ್ರತ್ಯೇಕ ಅಥವಾ ಹೆಚ್ಚಿನ ಸ್ಥಾನಮಾನದ ಪ್ರಸ್ತಾಪದ ಮೂಲಕ ನಾವು (ಕನ್ನಡಿಗರು) ರಾಷ್ಟ್ರಮಟ್ಟದಲ್ಲಿ ಯೋಚಿಸದೆ ಕುಬ್ಜಮನಸ್ಸಿನಿಂದ ನಮ್ಮ ಬಗ್ಗೆಯಷ್ಟೆ ಯೋಚಿಸುವವರೆಂದು ಬಿಂಬಿಸುವುದು ಬೇಕಾಗಿರಲಿಲ್ಲ.

               ಇನ್ನೂ ನಿಮಗೆ ರಾಜ್ಯಕ್ಕೊಂದು ಪ್ರತ್ಯೇಕ ಧ್ವಜ ಬೇಕೆಂದು ಅನಿಸುತ್ತಿದ್ದರೆ, ಹೀಗೊಮ್ಮೆ ಯೋಚಿಸಿನೋಡಿ:
               “ನಮ್ಮದೇ ರಾಜ್ಯಉತ್ತರ ಕರ್ನಾಟಕಕೆಲ ಜನರು ಹೊಸದಾಗಿ ಉತ್ತರ ಕರ್ನಾಟಕವೆಂಬ ರಾಜ್ಯವನ್ನು ಸ್ಥಾಪಿಸಲು ಬೇಡಿಕೆಯಿಟ್ಟಿದ್ದರು, ಆದರೆ ಆ ಸಮಯದಲ್ಲಿ ಯಾವುದೇ ಪ್ರಜ್ಞಾವಂತ ಕನ್ನಡಿಗ ಅದಕ್ಕೆ ಬೆಂಬಲ ನೀಡಲಿಲ್ಲ. ಏಕೆಂದರೆ ಎಲ್ಲರಿಗೂ ಬೇಕಾದುದು ಏಕತೆ, ವಿಭಜನೆಯಲ್ಲ. ಅಂದಮೇಲೆ, ನಮ್ಮ ರಾಜ್ಯದ ಏಕತೆಗೆ ಭಂಗವಾದರೆ ಪುಟಿದೇಳುವ ನಾವು, ದೇಶದ ಏಕತೆಯ ಭಾವನೆಗಳಿಗೆ ಧಕ್ಕೆಯಾದರೆ ಅದನ್ನು ಒಪ್ಪಲು ಹೇಗೆ ಸಾಧ್ಯ?”

ನೆನಪಿರಲಿ, ಒಗ್ಗಟ್ಟಿನಲ್ಲಿ ಬಲವಿದೆ. ಏಕತೆಯಲ್ಲಿರುವಾಗಲಷ್ಟೇ ದೇಶದಲ್ಲಿ ಸೌಖ್ಯ, ಒಡಕು ಮೂಡಿದರೆ ಎದುರಾಗುವುದೆಲ್ಲ ಬರೀ ಸ್ವಂತನಾಶ!


               ನೀವೆಲ್ಲ ತಿಳಿದಿರುವಂತೆ, ಬರುವ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಮೊದಲು ಹಿಂದೂಗಳನ್ನು ಒಡೆದು ಪ್ರತ್ಯೇಕ ಲಿಂಗಾಯತರ ಜಾತಿಯೊಂದನ್ನು ಹುಟ್ಟುಹಾಕಲು ಹವನಿಸಿತು. ಅದರ ಹಿಂದೆ ಭಾಜಪಯಡಿಯೂರಪ್ಪ ಹೊಂದಿರುವ ಬಲವನ್ನು ಮುರಿಯುವ ತಂತ್ರವಿರುವುದು ಈಗ ಎಲ್ಲರಿಗೂ ತಿಳಿದ ವಿಷಯ. ಯಾವಾಗ ಹಿಂದೂಗಳು ಒಡಕುಮೂಡಿಸುವ ಪ್ರಲೋಭನೆಗೆ ಬಲಿಯಾಗದೆ ಒಂದಾಗಿ ನಿಂತರೋ, ಆಗ ಕಾಂಗ್ರೆಸ್ ಎಂಬ ರಾಜಕೀಯ ಪಕ್ಷಕ್ಕೆ ನೆನಪಾದ ದಾಳ “ಕನ್ನಡಿಗರಿಗೆ ಇರುವ ಭಾಷೆ ಮತ್ತು ನಾಡಿನ ಅಭಿಮಾನ”. ಅಧಿಕಾರ ಸಿಕ್ಕಾಗಿನಿಂದ ನೆನಪಾಗದ ಕನ್ನಡಪರ ಯೋಜನೆಗಳು ಚುನಾವಣೆ ಸಮೀಪಿಸಿದಂತೆ ಹಟ್ಟಾತ್ತನೆ ನೆನಪಾಗಿಬಿಡುತ್ತವೆ! ಐದು ವರ್ಷಗಳಲ್ಲಿ ಕಾಣದ ಹಿಂದಿ ಹೇರಿಕೆ ತಟ್ಟನೆ ಕಣ್ಣಿಗೆ ಬೀಳುತ್ತದೆ! ಕನ್ನಡಿಗರು ಕಾವೇರಿ, ಮಹಾದಾಯಿ ನೀರನ್ನು ಕಳೆದುಕೊಂಡು ಪರದಾಡುವಾಗ ಕೆಲಸ ಮಾಡದ ಸರ್ಕಾರಕ್ಕೆ, ಕನ್ನಡಿಗರಲ್ಲಿ ಇಲ್ಲದ ಭಾವನೆಗಳನ್ನು ಹುಟ್ಟುಹಾಕಿ ಅವುಗಳಿಗೆ ಜನರ ಒತ್ತಡದ ಬೇಡಿಕೆ ಇಲ್ಲದಿದ್ದರೂ ಅವುಗಳನ್ನು ಕಾರ್ಯರೂಪಕ್ಕೆ ತರಲೇಬೇಕು ಎಂದೆನಿಸುತ್ತದೆ!

               ಹೀಗೆಯೇ ಮುಂದುವರಿದರೆ, ಮುಂದೊಂದು ದಿನ ಕಾಂಗ್ರೆಸ್ (ಅಥವಾ ಬೇರಾವುದೆ) ಪಕ್ಷದಿಂದ ಕೆಟ್ಟಜನರ ಕೈಗೆ ಅಧಿಕಾರ ದೊರೆತರೆ ಅವರು ಖಂಡಿತವಾಗಿಯೂ “ಕರ್ನಾಟಕಕ್ಕೆ ಕಾಶ್ಮೀರದಂತೆ ಪ್ರತ್ಯೇಕ ಸ್ಥಾನಮಾನ ಬೇಕು” ಅಥವಾ “ಕರ್ನಾಟಕ ಒಂದು ಪ್ರತ್ಯೇಕ ದೇಶವಾಗಬೇಕು” ಎಂದು ನಮ್ಮ ಮುಗ್ಧ ಜನರ ತಲೆಕೆಡಿಸಿ ತಮ್ಮ ರಾಜಯಕೀಯದ ಬೇಳೆ ಬೇಯಿಸಿಕೊಳ್ಳುತ್ತಾರೆ.

               ನಿಜಕ್ಕೂ ನಮಗೆ ಪ್ರತ್ಯೇಕ ಧ್ವಜದ ಅವಶ್ಯಕತೆ ಇಲ್ಲ. ರಾಷ್ಟ್ರಧ್ವಜ ನಮ್ಮನ್ನೂ ಪ್ರತಿಬಿಂಬಿಸುತ್ತದೆ. ಅದನ್ನು ಗೌರವಿಸಿದರೆ, ನಮ್ಮ ಕನ್ನಡಾಂಬೆಯನ್ನೇ ಗೌರವಿಸಿದಂತೆ.

               ದೇಶದಲ್ಲಿ ಒಡಕುಮೂಡಿಸುವ ಭಾವನೆಗಳನ್ನು ಹುಟ್ಟು ಹಾಕಿ ಕೆಟ್ಟವರೆನಿಸಿಕೊಳ್ಳುವ ಬದಲು, ದೇಶದ ಏಳಿಗೆಗೆ ನಮ್ಮದೇ ಆದ ಅನನ್ಯ ಮಾರ್ಗದಲ್ಲಿ ಕೆಲಸ ಮಾಡಿ ಇತರ ರಾಜ್ಯದ ಜನತೆ “ವಾಹ್... ಅವರು ಕನ್ನಡಿಗರು” ಎಂದು ನಮ್ಮ ಕಡೆಗೆ ಬೆರಳು ತೋರಿಸಿ ಹೇಳುವಂತಾಗಬೇಕು.